ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ನಲಿಕಲಿ ಕಾರ್ಯಕ್ರಮ ಬಲವರ್ಧನೆ

Home

ಹಿನ್ನೆಲೆ:

1992-93ನೇ ಸಾಲಿನಲ್ಲಿ ಯುನಿಸೆಫ್‌ ಸಹಯೋಗದೊಂದಿಗೆ,‌ ಹೆಚ್.ಡಿ ಕೋಟೆ ತಾಲ್ಲೂಕಿನ ಕೆಲವು ಹಳ್ಳಿಗಳಲ್ಲಿ ಸೂಕ್ಷ್ಮ ಯೋಜನೆಯನ್ನು ಕೈಗೊಳ್ಳಲಾಯಿತು. ಶಾಲೆಯು ಅನಾಕರ್ಷಕವಾಗಿದ್ದು, ಇತರೆ ಕೆಲವು ಬಾಹ್ಯ ಕಾರಣಗಳ ನಿಮಿತ್ತ ವಿದ್ಯಾರ್ಥಿಗಳು ಶಾಲೆ ತೊರೆಯುತ್ತಿರುವುದನ್ನು ಸೂಕ್ಷ್ಮ ಯೋಜನೆಯ ಫಲಿತವು ಬಹಿರಂಗಪಡಿಸಿತು, ಮೇಲಾಗಿ ಶಾಲೆಯಿಂದ ಹೊರಗುಳಿಯುವ ಮಕ್ಕಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿರುವುದನ್ನು ಗಮನಿಸಲಾಯಿತು. ಶಾಲೆಗಳಲ್ಲಿ ಕಂಡುಬರುವ ಬಹುವರ್ಗ ಹಾಗೂ ಬಹುಹಂತದ ಕಲಿಕೆಯ ಪ್ರಮುಖ ಸವಾಲುಗಳನ್ನು ಸಹ ಗುರುತಿಸಿಕೊಳ್ಳಲಾಯಿತು. ಪಠ್ಯ ಪುಸ್ತಕಗಳ ಮೇಲಿನ ಅತಿಯಾದ ಅವಲಂಬನೆ ಹಾಗೂ ಆಕರ್ಷಕವಲ್ಲದ ಶಾಲಾ ಕಲಿಕಾ ವಾತಾವರಣವು ಮಕ್ಕಳ ಕಡಿಮೆ ಕಲಿಕಾ ಸಾಧನೆಗೆ ಕಾರಣವಾಗಿರುವುದನ್ನು ಈ ಹಂತದಲ್ಲಿ ಅವಲೋಕಿಸಲಾಯಿತು.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ನಲಿಕಲಿ ಬೋಧನಾ ಕಲಿಕಾ ಪದ್ಧತಿಯನ್ನು ಮೊಟ್ಟಮೊದಲಿಗೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಅನುಷ್ಟಾನಕ್ಕೆ ತರಲಾಯಿತು. ಬಹುವರ್ಗ ಬೋಧನೆಯ ಸಮಸ್ಯೆಯನ್ನು ಪರಿಹರಿಸುವ ಸಾಧನವಾಗಿ ಈ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿದ್ದರೂ, ಇದು ಸಾಂಪ್ರದಾಯಿಕ ಬೋಧನೆ ಮತ್ತು ಪಠ್ಯಕ್ರಮದ ಕೆಲವು ದೋಷಗಳನ್ನು ಪರಿಹರಿಸುವ ಪ್ರಾದೇಶಿಕ ವಿಧಾನವಾಗಿದೆ. ಆಸಕ್ತ ಅಧಿಕಾರಿಗಳ ಹಾಗೂ ತಜ್ಞರ ನೆರವಿನಿಂದ ‌ಹೆಚ್‌.ಡಿ.ಕೋಟೆ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಈ ಪದ್ಧತಿಗೆ ಪೂರಕವಾಗುವಂತೆ ಕಲಿಕಾ ಸಾಮಗ್ರಿಗಳನ್ನು ತಮ್ಮ ಹಂತದಲ್ಲಿ ಸಿದ್ಧಪಡಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕ ರಾಜ್ಯದಲ್ಲಿ ನಲಿಕಲಿ ಕಾರ್ಯಕ್ರಮ ಒಂದು ಪ್ರತಿಷ್ಟಿತ ಚಟುವಟಿಕೆ ಆಧಾರಿತ ಬೋಧನಾ ಕಲಿಕಾ ಪದ್ಧತಿಯಾಗಿದೆ. ಪ್ರಸ್ತುತ 2009-10ನೇ ಸಾಲಿನಿಂದ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮಾಧ್ಯಮದ 01 ರಿಂದ 03ನೇ ತರಗತಿಗಳಲ್ಲಿ ಹಾಗೂ 2010-11ನೇ ಸಾಲಿನಿಂದ ಉರ್ದು ಮಾಧ್ಯಮದ 01 ಮತ್ತು 02ನೇ ತರಗತಿಗಳಲ್ಲಿ ನಲಿಕಲಿ ಚಟುವಟಿಕೆ ಆಧಾರಿತ ಬೋಧನಾ ಕಲಿಕಾ ಪದ್ಧತಿಯನ್ನು ಅನುಷ್ಠಾಗೊಳಿಸಲಾಗಿರುತ್ತದೆ. ಸದರಿ ನಲಿಕಲಿ ಪದ್ಧತಿಯನ್ನು ರಾಜ್ಯಾದ್ಯಂತ ಅನುಷ್ಟಾನಗೊಳಿಸಿ, ಸರಿ ಸುಮಾರು 15 ವರ್ಷಗಳು ಕಳೆಯುತ್ತಿವೆ. ಪ್ರಸ್ತುತ ಈ ಬೋಧನಾ ಕಲಿಕಾ ಪದ್ಧತಿಯನ್ನು ʼನಿಪುಣ್‌ ಭಾರತ್‌ – FLN  ಕಲಿಕೆಯ ತತ್ವಗಳʼ ಅಡಿಯಲ್ಲಿ ನಾವೀನ್ಯಯುತವಾಗಿ ಮಾರ್ಪಾಡುಗಳನ್ನು ಮಾಡಿಕೊಳ್ಳಲಾಗಿರುತ್ತದೆ.

ನಲಿಕಲಿ ತರಗತಿ ಪ್ರಕ್ರಿಯೆಯ ಮೂಲ ತತ್ವಗಳು:

  1. ಸ್ವ- ಕಲಿಕೆ
  2. ಸ್ವ-ವೇಗದ ಕಲಿಕೆ
  3. ಸಂತಸದಾಯಕ ಕಲಿಕೆ
  4. ಬಹುಹಂತದ ಕಲಿಕೆ

 

ನಲಿಕಲಿ ತರಗತಿ ಪ್ರಕ್ರಿಯೆಯಲ್ಲಿ ಅಳವಡಿಸಿರುವ ಗುಂಪುಗಳು:

2023-24ನೇ ಸಾಲಿನಿಂದ ಸಾಮೂಹಿಕ ಗುಂಪಿನೊಂದಿಗೆ 1. ಶಿಕ್ಷಕರ ಸಂಪೂರ್ಣ ಸಹಾಯದ ಗುಂಪು 2. ಅಭ್ಯಾಸ ಅಥವಾ ಪುನರ್ಬಲನ ಚಟುವಟಿಕೆಗಳ ಗುಂಪು ಹಾಗೂ 3. ಸ್ವ ಕಲಿಕೆ - ಸ್ವ ಮೌಲ್ಯಮಾಪನ ಗುಂಪು ಎಂಬುದಾಗಿ ಗುರುತಿಸಿದೆ.

ನಲಿಕಲಿ ತರಗತಿಗಳ ಚಿತ್ರಣ:

   
   

ಇಂಗ್ಲಿಷ್‌ ನಲಿಕಲಿ(ENK) ಕಾರ್ಯಕ್ರಮ:

ಕರ್ನಾಟಕ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿಕಲಿ ಘಟಕಗಳಲ್ಲಿ ದ್ವಿತೀಯಾ ಭಾಷೆ ಇಂಗ್ಲಿಷ್‌ ವಿಷಯದ ಕಲಿಕೆಯನ್ನು ನಲಿಕಲಿ ಮಾದರಿಯಲ್ಲಿ ಚಟುವಟಿಕೆ ಆಧಾರಿತ ಪದ್ಧತಿಗೆ ಒಳಪಡಿಸಲಾಗಿದೆ. ಇದನ್ನು ENK  ಕಾರ್ಯಕ್ರಮ ಎಂದು ಕರೆಯಲಾಗುತ್ತದೆ. 2019-20ನೇ ಸಾಲಿನಲ್ಲಿ 01ನೇ ತರಗತಿಗೆ ಲೆವೆಲ್‌-01 ರ ಕಾರ್ಯಕ್ರಮವನ್ನು, 2020-21ರಲ್ಲಿ 02ನೇ ತರಗತಿಗೆ ಲೆವೆಲ್-02‌ ರ ಕಾರ್ಯಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದೆ. 2022-23ರಲ್ಲಿ 03ನೇ ತರಗತಿಗೆ ಲೆವೆಲ್‌-03 ರ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ಎಲ್ಲಾ ನಲಿಕಲಿ ಘಟಕಗಳಿಗೂ ಇಲಾಖೆ ವತಿಯಿಂದ  ಕಲಿಕಾ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿದೆ. ENK ಕಲಿಕಾ ಸಾಮಗ್ರಿಗಳ ರಚನೆ ಹಾಗೂ ವಿನ್ಯಾಸಕ್ಕಾಗಿ ರಾಜ್ಯದ ಸಂಪನ್ಮೂಲ ಶಿಕ್ಷಕರ ನೆರವಿನೊಂದಿಗೆ ಯುನಿಸೆಫ್‌ ಕಾರ್ಯಕ್ರಮಗಳ ಮತ್ತು ಸಮಾಲೋಚಕರ ತಾಂತ್ರಿಕ ಸಹಾಯವನ್ನು ಬಳಸಿಕೊಳ್ಳಲಾಗಿದೆ.  

ಶಿಕ್ಷಕರ ತರಬೇತಿ:

ಪ್ರಸ್ತುತ ಕನ್ನಡ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 48,833 ನಲಿಕಲಿ ಘಟಕಗಳಿದ್ದು, ಉರ್ದು ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ  ಒಟ್ಟು 3,817 ನಲಿಕಲಿ ಘಟಕಗಳಿವೆ. ತರಗತಿ ಕಲಿಕಾ ಪ್ರಕ್ರಿಯೆಯನ್ನು ಶಿಕ್ಷಕರಿಗೆ ಅರ್ಥೈಸಲು DSERT  ಸಂಸ್ಥೆಯ ನೇತೃತ್ವದ ಮೂಲಕ ಎಲ್ಲಾ ಡಯಟ್‌ಗಳ ಮೇಲ್ವಿಚಾರಣೆಯಲ್ಲಿ ತರಬೇತಿಯನ್ನು ಆಯೋಜಿಸಲಾಗುತ್ತದೆ. ಪ್ರತೀ ಡಯಟ್‌ ಹಂತದಲ್ಲಿ ನಲಿಕಲಿ ಕಾರ್ಯಕ್ರಮವನ್ನು ಅನುಪಾಲನೆಗೊಳಿಸಲು ಓರ್ವ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ನಿಯೋಜಿಸಿಕೊಳ್ಳಲಾಗಿದೆ. ಅಗತ್ಯ ಮಾರ್ಗದರ್ಶನಕ್ಕೆ ಸಂಬಂಧಿಸಿದ e- ಸಂಪನ್ಮೂಲಗಳನ್ನು ಡಿ.ಎಸ್.ಇ.ಆರ್.‌ಟಿ ವೆಬ್‌ ಸೈಟ್‌ನಲ್ಲಿ ಅಪ್ಲೋಡ್‌ ಮಾಡಲಾಗಿದೆ.

ಕಲಿಕಾ ಬೋಧನಾ ಸಾಮಗ್ರಿಗಳು (LTM’s):

ʼಬುನಾದಿ ಅಕ್ಷರ ಮತ್ತು ಸಂಖ್ಯಾಜ್ಞಾನದ (FLN)ʼ ಮೂಲಭೂತ ಕಲಿಕೆಯ ತತ್ವವನ್ನಾಧರಿಸಿ ಮತ್ತು ಕಲಿಕಾ ಸಾಮರ್ಥ್ಯ ಹಾಗೂ ಕಲಿಕೆಯ ಫಲಗಳ ನೆಲೆಗಟ್ಟಿನಲ್ಲಿ ನಲಿಕಲಿ ಪದ್ಧತಿಗೆ ಅನುಗುಣವಾಗಿ ತರಗತಿವಾರು ಮತ್ತು ವಿಷಯವಾರು ಕಲಿಕಾ ಸಾಮಗ್ರಿಗಳನ್ನು ಶಿಕ್ಷಣ ತಜ್ಞರು ಹಾಗೂ ಸಂಪನ್ಮೂಲ ಶಿಕ್ಷಕರು ಒಟ್ಟುಗೂಡಿ ಸಿದ್ಧಪಡಿಸುತ್ತಾರೆ. ಕಲಿಕಾ ಸಾಮಗ್ರಿಗಳನ್ನು ರಾಜ್ಯ ಹಂತದಿಂದಲೇ ಸಿದ್ಧಪಡಿಸಿ, ಕೇಂದ್ರ ಪಿ.ಎ.ಬಿ ಅನುಮೋದಿತ ಅನುದಾನದಲ್ಲಿ KTBS ಸಂಸ್ಥೆಯ ಮೂಲಕ ಮುದ್ರಿಸಿ, ಎಲ್ಲಾ  ಶಾಲೆಗಳಿಗೂ ಒದಗಿಸಲಾಗುತ್ತಿದೆ.

ಅಭ್ಯಾಸ ಸಹಿತ ಪಠ್ಯ ಸಮಗ್ರಿಗಳು:

ನಲಿಕಲಿ ಬೋಧನಾ ಕಲಿಕಾ ಪದ್ಧತಿಯಲ್ಲಿ ಕಲಿಯುತ್ತಿರು ಎಲ್ಲಾ ಮಕ್ಕಳಿಗೂ ರಾಜ್ಯ ಸರ್ಕಾರದ ʼವಿದ್ಯಾ ವಿಕಾಸʼ ಯೋಜನೆಯ ಮೂಲಕ ಪ್ರತೀ ವರ್ಷ ಉಚಿತವಾಗಿ ಅಭ್ಯಾಸ ಸಹಿತ ಪಠ್ಯ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಬುನಾದಿ ಅಕ್ಷರ ಹಾಗೂ ಸಂಖ್ಯಾ ಜ್ಞಾನದ ಕಲಿಕೆಯ ತತ್ವಗಳ ಅಡಿಯಲ್ಲಿ ಅಭ್ಯಾಸ ಸಹಿತ ಪಠ್ಯ ಪುಸ್ತಕಗಳನ್ನು ರಚಿಸಲಾಗಿದ್ದು, ರಚನೆಯ ಕೆಲಸವನ್ನು ಸಮಗ್ರ ಶಿಕ್ಷಣ ಕರ್ನಾಟಕದ ನೇತೃತ್ವದಲ್ಲಿ ಶಿಕ್ಷಣ ತಜ್ಞರ ನೆರವಿನೊಂದಿಗೆ ಹಾಗೂ ವಿವಿಧ ಎನ್.ಜಿ.ಓ ಸಂಸ್ಥೆಯ ಸಹಭಾಗಿತ್ವದೊಂದಿಗೆ ನಿರ್ವಹಿಸಲಾಗುತ್ತಿದೆ.